Monday 14 December 2009

ತಲಕಾಡಿಗೆ ಹೋಗಿ ಬಂದ ನಂತರ....


ತಲಕಾಡಿಗೆ ಹೋಗಿ ಬಂದ ಖುಷಿಯಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಾ, ಎರಡು ದಿನ ಸುಮ್ಮನೆ ಕಳೆದೆ. ನಂತರ ಎದ್ದು ಯೋಚಿಸತೊಡಗಿದರೆ ಕಣ್ಣ ಮುಂದೆ ಬರಿ ತಲಕಾಡಿನ ಮರಳೇ ತುಂಬಿಹೋಗಿ, ಬೇರೆನೂ ಕಾಣಿಸದೆ ಚಿಂತಿಸುತ್ತಾ ಕುಳಿತುಕೊಳ್ಳುವಂತಾಯಿತು. 'ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗಳಿಗೆ ಮಕ್ಕಳಾಗದೇ ಹೋಗಲಿ' ಎಂದು ಎಲ್ಲರಿಗೂ ಗೊತ್ತಿರುವ ಹಳೆಯ ಶಾಪದ ಕಥೆಯನ್ನು ಇಲ್ಲಿಯೂ ಬರೆದರೆ ತುಂಬಾ ಬೋರಾಗುತ್ತದೆ ಎಂದು ಅನಿಸಿ, ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. 'ತಲೆ' ಮತ್ತು 'ಕಾಡ' ಎನ್ನುವುದು ಇಬ್ಬರು ಬೇಡರ ಹೆಸರೆಂದೂ, ಆ ಹೆಸರಿನ ಹಿಂದೆ, 'ಸೋಮದತ್ತ' ಎಂಬ ಆನೆಯ ಜನ್ಮ ಪಡೆದಿದ್ದ ಮುನಿಯ ಕಥೆಯೂ ಇದೆಯೆಂದು ನಾನು ತಲಕಾಡಿಗೆ ಹೋಗಿ ಬಂದ ನಂತರ ಅಲ್ಲಿ ಕೊಂಡ ಪುಸ್ತಕದಲ್ಲಿ ಓದಿ ತಿಳಿದ ವಿಷಯಗಳು.

ನಾವು ತಲಕಾಡಿಗೆ ಹೋಗಿದ್ದು ಎರಡು ವಾರಗಳ ಹಿಂದೆ. ನಾನು, ಸ್ನೇಹಿತ ವಜ್ರಾಂಗಿ ಸೂರ್ಯ ಮತ್ತು ಪ್ರಕಾಶ್. ಆವತ್ತು ತಲಕಾಡು ತಲುಪಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಬೆಳಿಗ್ಗೆ ಐದಕ್ಕೆಲ್ಲಾ ಎದ್ದು, ಮೆಜೆಸ್ಟಿಕ್ ನಿಂದ (ಒಂದು ಗಂಟೆ ತಡವಾಗಿ ಬಂದ) ಟ್ಯುಟಿಕೊರಿನ್ ರೈಲು ಹತ್ತಿ ಮದ್ದೂರಿನಲ್ಲಿಳಿದು, ತಟ್ಟೆ ಇಡ್ಲಿ ತಿಂದು ರೆಡಿಯಾಗುವ ಹೊತ್ತಿಗೆ 9:30 ಆಗಿತ್ತು. ಅಲ್ಲಿಂದ ಮಳವಳ್ಳಿ. ನಂತರ ತಲಕಾಡು. ಸರ್ಕಾರಿ ಸಾರಿಗೆ. ಹಿಂದಿನ ದಿನ, ರಾತ್ರಿ (ನೈಟ್ ಶಿಪ್ಟ್) ಪಾಳಿಯಲ್ಲಿ ಕೆಲಸ ಮಾಡಿದ್ದರಿಂದ ಮೂವರೂ ಬಸ್ಸಿನಲ್ಲಿ ಕುಳಿತು ನಾಚಿಕೆಯಿಲ್ಲದೆ ತೂಕಡಿಸುತ್ತಿದ್ದೆವು.

ನಡುವೆ ನಾನು ಕಷ್ಟಪಟ್ಟು ಕಣ್ಣು ತೆರೆದು ಕಿಟಕಿಯ ಹೊರಗೆ ತೂರಿಬಿಟ್ಟೆ. ಹಸಿರು!. ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು. ಮಳವಳ್ಳಿ ದಾಟುತ್ತಿದ್ದಂತೆ ಈ ಊರು ಥೇಟ್ ಮಲೆನಾಡಿನ ಸ್ವರೂಪ ಪಡೆದುಕೊಳ್ಳುತ್ತದೆ. ನಳನಳಿಸುತ್ತಿರುವ ಬತ್ತದ ಗದ್ದೆಗಳು, ಬಲಿತು ನಿಂತ ಕಬ್ಬನ ತೋಟಗಳು, ಟಮೋಟೋ, ದೊಣ್ಣೆಮೆಣಸಿನಕಾಯಿ, ಸೊಪ್ಪು ಬೆಳೆಯುವ ಫಲವತ್ತಾದ ಭೂಮಿ. ಮುಂದೆ ನಿದ್ರೆ ಬರಲಿಲ್ಲ. 40 ಕಿಮೀನ ಈ ದಾರಿಯಲ್ಲಿ ಮೂರು ಕೆರೆಗಳನ್ನು ನೋಡಿದೆ. ಮೂರೂ ದೊಡ್ಡ ದೊಡ್ಡ ಕೆರೆಗಳು. ಈ ಕೆರೆಯ ನೀರನ್ನೇ ಸಾವಿರಾರು ರೈತರು ಕಾಲುವೆಯ ಮೂಲಕ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಬೆವರು ಹರಿಸಿ ಹುಲುಸಾದ ಬೆಳೆ ತೆಗೆಯುತ್ತಾರೆ.

ಪೂವಳ್ಳಿಯ ಸಮೀಪ ಬಸ್ಸು ನಿಂತಾಗ ಮತ್ತೊಂದು ಕೆರೆ ನೋಡಿದೆ. ಸ್ಟಟಿಕದಷ್ಟೇ ಶುಭ್ರವಾದ ನೀರು. ಬೇಕಾದರೆ ಈ ಕೆರೆಯ ದಡದಲ್ಲಿ ನಿಂತು ನೀರಿನಲ್ಲಿ ಮುಖ ನೋಡುತ್ತಾ ತಲೆ ಬಾಚಿಕೊಳ್ಳಬಹುದಾದಷ್ಟು ಸ್ವಚ್ಛ ನೀರು. ದಾರಿಯುದ್ದಕ್ಕೂ ಎಲ್ಲಿಯೂ ಬಡತನ ಕಾಣಲಿಲ್ಲ. ಯಾರ ಭೂಮಿಯ ಫಸಲೂ ಒಣಗಿರುವುದು ಕಂಡಿಲ್ಲ. ಹಸಿರು ತುಂಬಿದ, ಭೂಮಿಯ ಬಗ್ಗೆ ಪ್ರೀತಿ ಮೂಡಿಸುವ ಈ ಊರು ಇಷ್ಟವಾಗತೊಡಗಿತು. ರೈತರು ತಮ್ಮ ಕೃಷಿಯ ಬಗ್ಗೆ ನಂಬಿಕೆ ಮತ್ತು ಆಸಕ್ತಿ ಕಳೆದುಕೊಂಡು, ನಮ್ಮ ಹಳ್ಳಿಗಳು ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನನಗೆ ಈ ಊರಿನ ಬಗ್ಗೆ ಸಹಜವಾಗಿಯೇ ಹೆಮ್ಮೆ ಎನಿಸತೊಡಗಿತು.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂಚರಿಸುವಾಗ ಗಮನಿಸಿದ ಮುಖ್ಯ ವಿಷಯವೆಂದರೆ ಈ ಜಿಲ್ಲೆಗಳಲ್ಲಿನ ನೀರಾವರಿ ವ್ಯವಸ್ಥೆ. ದಶಕಗಳ ಹಿಂದೆ ರಚನೆಗೊಂಡಿರುವ ನಾಲೆ ವ್ಯವಸ್ಥೆ ಇಲ್ಲಿನ ವ್ಯವಸಾಯವನ್ನು ಎಷ್ಟೊಂದು ಸಮೃದ್ಧವಾಗಿಸಿದೆ ಎಂದರೆ ನೀವೊಮ್ಮೆ ಈ ಪ್ರದೇಶಗಳಲ್ಲಿ ಅಡ್ಡಾಡಿ ನೋಡಬೇಕು. ಬಹುಶ್ಯ: ಇಂದು ನಮ್ಮ ಸರ್ಕಾರದ ಕೈಯಿಂದಲೂ ಇಷ್ಟು ಯೋಜಿತವಾದ ನೀರಾವರಿ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ. ಚಿಕ್ಕದೇವರಾಯ ನಾಲೆ, ದೊಡ್ಡ ದೇವರಾಯ ನಾಲೆ, ವಿರಿಜಾ ನಾಲೆ, ಬಂಗಾರದೊಡ್ಡಿ ನಾಲೆ, ರಾಮಸ್ವಾಮಿ ನಾಲೆ, ರಾಜ ಪರಮೇಶ್ವರಿ ನಾಲೆ, ಮಾಧವ ಮಂತ್ರಿ ನಾಲೆ ಎಷ್ಟೊಂದು ನಾಲೆಗಳು. ಈ ನಾಲೆಗಳಿಗೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ಇಲ್ಲಿನ ಕೃಷಿಕರು ವ್ಯವಸಾಯ ಮಾಡುತ್ತಾರೆ.

14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸ್ಥಳೀಯ ಮಂತ್ರಿಯಾಗಿದ್ದ ಮಾಧವ ಎಂಬುವರು ತಲಕಾಡು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕಾಲುವೆ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಇನ್ನೊಂದೆಡ ಇದೇ ಮಂತ್ರಿ ೧೩೪೨ರಲ್ಲಿ, ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ತಲಕಾಡು ಪಟ್ಟಣ ಮರಳ ಗುಡ್ಡವಾಗಿ ಮಾರ್ಪಾಡಾಯಿತು ಎನ್ನುತ್ತಾರೆ ಕೆಲವರು. ತಲಕಾಡಿನ ಬಗ್ಗೆ ಇರುವ ಈ ಎರಡು ಕಥೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವುದು ನಿಮಗೆ ಬಿಟ್ಟಿದ್ದು.

ಆದರೆ ತಲಕಾಡಿನ ಮರಳಿನಡಿಯಲ್ಲಿ ನೀರಾವರಿ ಕಾಲುವೆಗಳು ಇದ್ದವು ಎನ್ನುವುದಕ್ಕೆ ಈಗ ವೈಜ್ಞಾನಿಕ ಆಧಾರಗಳಿವೆ. ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮತ್ತು ಪುರಾತತ್ವ ಇಲಾಖೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಇದು ಧೃಡಪಟ್ಟಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್ ) ಅಡಿ ಉಪಗ್ರಹ ಮತ್ತು ರಾಡಾರ್ ತಂತ್ರಜ್ಞಾನದಿಂದ ಕಾವೇರಿ ನದಿ ತಟದಲ್ಲಿರುವ ತಲಕಾಡಿನ ಮರಳು ಗುಡ್ಡದ ಕೆಳಗಿರುವ ಸುಮಾರು ನಾಲ್ಕು ಶತಮಾನಗಳ ಹಿಂದಿನ ಕಾಲುವೆಗಳನ್ನು ಇವರು ಪತ್ತೆ ಹಚ್ಚಿದ್ದಾರೆ.

ತಿರುಮಲ ರಾಜನ ಪತ್ನಿ ಆಲಮೇಲಮ್ಮ ಹಾಕಿದ್ದ ಶಾಪದಿಂದ ತಲಕಾಡು ಮರಳಾಯಿತು ಎಂದು ಇಂದಿಗೂ ನಂಬಿಕೊಂಡಿರುವವರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದಿರಬಹುದು. ಇರಲಿ. ಇಲ್ಲಿ ನಾನು ತಲಕಾಡಿನ ಬಗ್ಗೆ ಬರೆಯಲು ಹೊರಟು ನಾಲೆ ನೀರಾವರಿ ವ್ಯವಸ್ಥೆಯ ಬಗ್ಗೆ ಬರೆದಿದ್ದೇನೆ. ಆದರೂ ಮುಖ್ಯವಾಗಿ ಹೇಳಬೇಕಾದದ್ದು ಬೇರೆಯದೇ ಇದೆ.

ನಾವು ಉಣ್ಣುವ ಅನ್ನ, ಜೀವ ಕೊಡುವ ಉಸಿರು, ನೀರು, ನೆರಳು, ವಸತಿ, ಉಡುಪು ಎಲ್ಲದಕ್ಕೂ ಕಾರಣವಾದ ಪ್ರಕೃತಿಯಲ್ಲಿ ಏನೆಲ್ಲಾ ವಿಸ್ಮಯಗಳಿವೆಯಲ್ಲಾ? ನಮಗೆಲ್ಲಾ ಗೊತ್ತಿದೆ, ಮಾಯವಾದ ಕಾಡು, ಕೃಷಿಯಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ರೈತ, ಹಳ್ಳಿಗಳನ್ನು ಬಿಟ್ಟು ನಗರ ಸೇರುತ್ತಿರುವ ಯುವ ಜನತೆ. ಈ ಹೊತ್ತಿನಲ್ಲಿ, ನನಗೆ ಅನ್ನಿಸಿದ್ದು. ಪ್ರಕೃತಿಯ ಬಗ್ಗೆ ನಮಗೆಲ್ಲಾ ಹೆಮ್ಮೆ ಮೂಡಿ, ನಮ್ಮ ರೈತರಿಗೂ ಭೂಮಿಯ ಬಗ್ಗೆ ಹುರುಪು ಮೂಡಿ, ಅವರು ಕೃಷಿಯಲ್ಲಿ ಕಳೆದುಕೊಂಡಿರುವ ಆಸಕ್ತಿ, ನಂಬಿಕೆ ಮತ್ತೆ ಬಂದರೆ, ನಮ್ಮ ಹಳ್ಳಿಗಳು ಎಷ್ಟೊಂದು ಸಂಭ್ರಮ ಮತ್ತು ಸಮೃದ್ಧಿಯಲ್ಲಿರಲು ಸಾಧ್ಯ. ತಲಕಾಡಿಗೆ ಹೋಗಿ ಬಂದ ನಂತರ ಇದು ಮೊದಲ ಹಂತದ ಚಿಂತನೆ.

Saturday 21 November 2009

ಒಂದು ಖುಷಿಯ ಸಂಜೆ



ಒಂದಿಡಿ ದಿನವನ್ನು ಆಲಸಿಯಾಗಿ ಕಳೆದ ಬೇಸರದಲ್ಲಿ ಎದ್ದರೆ ಅದಾಗಲೇ ಸಂಜೆಯಾಗಿತ್ತು. ಹೊರಗೆ ಮಳೆ ಸುರಿದು ರಸ್ತೆಗಳನ್ನು ತೊಳೆದಿಟ್ಟ ಹಾಗಿತ್ತು. ಮಧ್ಯಾಹ್ನದಿಂದಲೇ ಸುರಿಯತೊಡಗಿದ ಮಳೆ ಹೊರಗೆ ಅಡಿ ಇಡದಂತೆ ಕೋಣೆಯೊಳಗೇ ನನ್ನನ್ನು ಬಂಧಿಸಿಟ್ಟಿತ್ತು. ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳು ತೊಯ್ದು ತೊಪ್ಪೆಯಾಗಿದ್ದವು.ಟಿ ಕುಡಿದು ಬರೋಣವೆಂದು ಹೊರಟೆ.ಆಗಲೇ ಗೊತ್ತಾಗಿದ್ದು ಪರ್ಸಿನಲ್ಲಿ ಹಣವಿಲ್ಲ ಎನ್ನುವುದು. ATM ಕಡೆ ಹೆಜ್ಜೆ ಹಾಕಿದೆ. ಮಾರು ದೂರ. ಜಿಬುರು ಮಳೆ ಬೇರೆ. ಮಿರ್ಚಿ ಬಜಿ ಕರಿದ ವಾಸನೆ,ಗೋಬಿ ಮಂಚೂರಿ, ಪ್ರೈಡ್ ರೈಸ್, ಪಾನಿಪೂರಿ ವಾಸನೆಗಳೆಲ್ಲಾ ಆ ಸಂಜೆಯೊಳಗೆ ಹದವಾಗಿ ಬೆರೆತು ಇಡಿ ವಾತಾವರಣ ಒಂದು ರೀತಿ ಉಲ್ಲಸಿತವಾಗಿತ್ತು. ಗದ್ದಲ ನಡೆದಿತ್ತು.

ATM ಮುಂದೆ ಜನ Q ನಿಂತಿದ್ದರು.ನಾನೂ ಆ ಸಾಲಿನಲ್ಲಿ ಸೇರಿಕೊಂಡೆ.ಅಷ್ಟರಲ್ಲಾಗಲೇ ಪುಟಾಣಿ ಹುಡುಗಿಯೊಬ್ಬಳು ನನ್ನ ಗಮನ ಸೆಳೆದಳು. 5-6 ವರ್ಷದ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಕಾಣಬಹುದಾದ ಹೊಳೆಯುವ ಕಣ್ಣುಗಳ ಮುದ್ದಾದ ಹುಡುಗಿ.ಆಕೆಯ ಕೈಯಲ್ಲೊಂದು ಬಣ್ಣದ ಛತ್ರಿ. ಅವರಮ್ಮ ATM ಕೌಂಟರ್ ಹೊರಗೆ ಕೊಡೆ ಇಟ್ಟು ಒಳಗೆ ದುಡ್ಡು ತೆಗೆಯಲು ಹೋಗಿದ್ದರು. ಈಕೆ ತನ್ನ ಕೊಡೆ ತಿರುಗಿಸುತ್ತಾ ಇನ್ನೊಂದು ಛತ್ರಿ ಗಾಳಿಯಲ್ಲಿ ಹಾರಿ ಹೋಗದಂತೆ ಕಾವಲು ನಿಂತಿದ್ದಳು.

ನನಗೆ ಯಾಕೋ ಈ ಮಗುವನ್ನು ಮಾತನಾಡಿಸಬೇಕು ಅಂತ ಅನಿಸತೊಡಗಿತು.
ಪುಟ್ಟೀ ನಿನ್ನ ಛತ್ರಿ ನನಗೆ ಕೊಡ್ತೀಯಾ? ಸುಮ್ಮನೆ ಕೇಳಿದೆ.
ಹಮ್.. ಇಲ್ಲ. ಕೊಡಲ್ಲ. ಇದು ನನ್ ಛತ್ರಿ.
ಹೋಗ್ಲಿ ನಿನ್ನ ಹೆಸರೇನು?
ನೀಹಾರಿಕಾ! ಥಟ್ಟನೆ ಹೇಳಿದಳು.
ನೀಹಾರಿಕಾ,ಹಾಗೆಂದರೆ ಏನು? ಗೊತ್ತಿದೆಯಾ?
ಹಮ್.. ಇಲ್ಲ.
ನಿನ್ನ ಹೆಸರಿನ ಅರ್ಥ ನಿನಗೆ ಗೊತ್ತಿಲ್ಲವಾ? ಹೋಗಲಿ,
ನೀನು ಎಷ್ಟನೇ ಕ್ಲಾಸಿನಲ್ಲಿ ಓದ್ತಿದಿಯಾ?
ಫಸ್ಟ್ ಸ್ಟಾಂಡರ್ಡ್.
ನೀಹಾರಿಕಾ ಎನ್ನುವ ಹೆಸರಿನ ಅರ್ಥ ಯಾರೂ ನಿನಗೆ ಹೇಳಿಕೊಟ್ಟಿಲ್ಲವಾ?
ಇಲ್ಲ..
ನೋಡು ಮರಿ, ನೀಹಾರಿಕಾ ಅಂದರೆ ನಕ್ಷತ್ರ ಪುಂಜ ಅಂತ ಅರ್ಥ. STAR...
ಹೌದಾ..!?
ಬ್ಯೂಟಿಫುಲ್ ... ನೈಟ್ ಕಾಣುವ ಸ್ಟಾರ್ ಅಲ್ವಾ ಅಂಕಲ್?
ಹೌದು. ನೋಡು ನಿನ್ನ ಹೆಸರು ಎಷ್ಟು ಮುದ್ದಾಗಿದೆಯಲ್ವಾ?
ನೀಹಾರಿಕಾಳ ಮುಖದಲ್ಲಿ ಸಾವಿರ ಮಲ್ಲಿಗೆ ಅರಳಿದ ಸಂಭ್ರಮ....

ನಾನು ಮುಂದೆ ಸಾಗಲಾರದೆ ನೋಡುತ್ತಾ ನಿಂತೆ. ನೀಹಾರಿಕಾ ಎರಡು ಸುತ್ತು ನನ್ನತ್ತ ತಿರುಗಿ ಕೈಬೀಸಿ ಹೊರಟು ಹೋದಳು. ನನ್ನಲ್ಲಿ ಹೊಸ ಖುಷಿ ಅರಳತೊಡಗಿತು.ನಾನು ಚಿಕ್ಕವನಿದ್ದಾಗ,ಈ ಹುಡುಗಿಯಷ್ಟೇ ವಯಸ್ಸಿನ ಮಗುವಾಗಿದ್ದಾಗ, ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಮೈಲಿ ದೂರ ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಅವರಿವರ ಛತ್ರಿಯ ಕೆಳಗೆ ನಿಂತು, ದೇಹವೆಲ್ಲಾ ತೊಯ್ದು ತೊಪ್ಪೆಯಾಗಿ ಶಾಲೆ ತಲುಪುತ್ತಿದ್ದೆ. ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ನಡೆದು ಹೋದರೂ, ಆ ಮಳೆಯ ದಾರಿಯಲ್ಲಿ ಏನೋ ಒಂದು ಖುಷಿ ಇರುತ್ತಿತ್ತು.

ನೆನಪು ಹಾಗೂ ಸುತ್ತಣ ದೃಶ್ಯಗಳ ಸಮ್ಮಿಶ್ರಣ ಹೊತ್ತ ಈ ಸಂಜೆ ಯಾಕೋ ವಿಶೇಷ ಸಂಜೆ ಎನಿಸತೊಡಗಿತು.ನೀಹಾರಿಕಾಳಂತ ಪುಟಾಣಿ ಹುಡುಗಿಗೆ ನಮ್ಮ ಮನಸ್ಸನ್ನು ಅರಳಿಸುವ,ಕುಪ್ಪಳಿಸುವಂತೆ ಮಾಡುವ, ಜ್ಞಾಪಿಸಿಕೊಳ್ಳುವಂತೆ ಮಾಡುವ ಶಕ್ತಿ ಇದೆಯಲ್ಲಾ ಎಂದು ಅಚ್ಚರಿ ಎನಿಸತೊಡಗಿತು. ಆಲಸಿತನ ನಿಧಾನವಾಗಿ ಕರಗತೊಡಗಿತು.

Sunday 1 November 2009

ಪ್ರವಾಹವೂ ಲೈವ್‌‌, ಪರಿಹಾರವೂ LIVE‌!

ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ? ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್‌!. ನೇರ, ದಿಟ್ಟ, ನಿರಂತರ ಚಾನೆಲ್‌ಗೆ ಹೊಸಬರ ಆಗಮನದಿಂದ ಒಂದಿಷ್ಟು ಹೊಸ ನೀರು ಹರಿದು ಬರಬಹುದು ಎಂಬ ಭ್ರಮೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಭ್ರಮೆ ಏನಾಗುತ್ತದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ.


ಈಗ, ಒಂದೆಡೆ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಹೇಳಿ, ತಾವೇ ತೀರ್ಪು ಕೊಡುವ ನಿರೂಪಕರೊಬ್ಬರು. ಇನ್ನೊಂದೆಡೆದೆ ಚಕ್ರವ್ಯೂಹ ಖ್ಯಾತಿಯ ಹಮೀದ್‌. ಮತ್ತೊಂದೆಡೆ ಸುವರ್ಣ ಚಾನೆಲ್‌ನ ಹೊಸ ಸಿಇಒ‌. ಇವರು ಮೂವರು ಸೇರಿ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಆ ಕಾರ್ಯಕ್ರಮಕ್ಕೆ ಮಾತನಾಡಲೆಂದು ಬಂದ ಅತಿಥಿಗಳಿಗೆ ಮಾತನಾಡಲು ಅವಕಾಶವೇ ಇಲ್ಲ ಎನ್ನುತ್ತಿದ್ದಾರೆ, ಹೊಸದಾಗಿ ಸುವರ್ಣ ನೋಡಲು ಪ್ರಾರಂಭಿಸಿರುವ ವೀಕ್ಷಕರು.

‘ಜಾಣನಲ್ಲದವನ ಮಾತು ಯಾರಿಗೂ ರುಚಿಸುವುದಿಲ್ಲ. ಹೇಳುವುದಕ್ಕೆ ತಕ್ಕುದಲ್ಲದ ಅನುಭವ ಕೇಳುವನ ಆಸಕ್ತಿ ಕೆರಳಿಸುವುದಿಲ್ಲ’ ಎನ್ನುವುದನ್ನು ಕೆಲವು ಟಿವಿ ನಿರೂಪಕರು ಇನ್ನಷ್ಟು ಜಾಣತನದಿಂದ ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಜಾಣ ಎಂದುಕೊಂಡು ಇಡಿ ಟಿವಿ ಪರದೆಯನ್ನು ತಾವೇ ಆಕ್ರಮಿಸಿಕೊಂಡು ಕುಳಿತರೆ ಅದೇ ಆ ಚಾನೆಲ್‌ಗೆ ಮುಳುವಾಗುತ್ತದೆ. ವೀಕ್ಷಕ ಎಷ್ಟು ದಿನ ನಿರೂಪಕನನ್ನು ಸಹಿಸಿಕೊಂಡಾನು?

ಇಲ್ಲಿ ಇದು ಮುಖ್ಯ ವಿಷಯವಲ್ಲ. ಇತ್ತೀಚೆಗೆ ಟಿವಿಯಲ್ಲಿ ಬರುವಂತಹ ಎಷ್ಟೋ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಭಾಗವಹಿಸುವವರ ನಿಲುವುಗಳನ್ನು ಹೇಳಿಕೊಳ್ಳುವ ತಾಣಗಳಾಗುತ್ತದೆಯೇ ಹೊರತು, ಪರಸ್ಪರ ಚರ್ಚೆಯ ಮೂಲಕ ಸಾರ್ವತ್ರಿಕ ನಿಲುವುಗಳನ್ನು ರೂಪಿಸುವ ವೇದಿಕೆಯಾಗುವುದಿಲ್ಲ. ನಮ್ಮ ಕನ್ನಡ ಚಾನೆಲ್‌ಗಳಲ್ಲಂತೂ ಇತ್ತೀಚೆಗೆ ಇಂತಹ ಬರಿ ಮಾತಿನ ಮನೋರಂಜನೆ, ‘ವಿಶೇಷ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ಸಾಕಷ್ಟು ಬರುತ್ತಿದೆ. ಒಮ್ಮೊಮ್ಮೆ ಈ ಮಾತು ಎಷ್ಟು ಕಳಪೆ ಮಟ್ಟಕ್ಕೆ ಹೋಗುತ್ತದೆಯೆಂದರೆ, ‘ನಿಮ್ಮ ಆಂತರಿಕ ಕಚ್ಚಾಟಗಳು ಈಗ ನಿಮಗೇ ಉಲ್ಟಾ ಹೊಡೆದಿದೆಯಾ? ಎಂದು ನಿರೂಪಕರೊಬ್ಬರು ಯಾವ ಮುಜುಗರವೂ ಇಲ್ಲದೇ ನೇರವಾಗಿ ರಾಜಕೀಯ ಮುಖಂಡರೊಬ್ಬರಿಗೆ ಕೇಳುತ್ತಾರೆ. ನಂತರ ಅವರು ಉತ್ತರಿಸುವ ಮುನ್ನವೇ ತಾವೇ ಉತ್ತರವನ್ನೂ, ಅಂತಿಮ ತೀರ್ಪನ್ನೂ ಕೊಡುತ್ತಾರೆ. ’ಅಂತಿಮ ತೀರ್ಪು’ ಅಂತ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದರೆ ಅದಕ್ಕೆ ಈ ನಿರೂಪಕನನ್ನು ಕಣ್ಣು ಮುಚ್ಚಿ ಜಡ್ಜ್‌ ಆಗಿ ಮಾಡಬಹುದು ಅಂತ ಅನಿಸುತ್ತಿದೆ.

ಟಿವಿ ಎನ್ನುವುದು ಒಂದು ಮಾಧ್ಯಮವೇ? ಇಲ್ಲ ಉದ್ಯಮವೇ? ಅಥವಾ ವ್ಯಾಪಾರವೇ? ಬಂಡವಾಳಶಾಹಿ ವ್ಯವಸ್ಥೆಯೇ? ಇತ್ಯಾದಿಗಳೆಲ್ಲ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವೀಕ್ಷಕನ ಅರಿವಿಗೆ ನಿಲುಕುವುದಿಲ್ಲ. ಆತ ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕೆಲವು ಚಾನೆಲ್‌ಗಳಿಗೆ ಇದೇ ಬಂಡವಾಳ. ಮಧ್ಯಮ ವರ್ಗದ ವೀಕ್ಷನಿಗೆ ಏನು ಬೇಕು ಎನ್ನುವುದನ್ನು ಈ ಚಾನೆಲ್‌ಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಒಂದು ಚಾನೆಲಿನ ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್‌ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್‌ ವೃತ್ತಿಪರತೆ ಹೊಂದಿದೆ. ಮೊನ್ನೆ ಒಂದು ಚಾನೆಲ್‌ ಪ್ರವಾಹ ಪೀಡಿತ ಪ್ರದೇಶದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿತು. ಐದು ಗ್ರಾಮಗಳನ್ನು ಹೊಸದಾಗಿ ನಿರ್ಮಿಸುವುದೆಂದರೆ ಸುಲಭದ ಕೆಲಸವೇ? ಸಂಗ್ರಹವಾದ ಹಣ ಇದಕ್ಕೆ ಸಾಕಾಗುವುದಿಲ್ಲ ಎಂದು ತಿಳಿದದ್ದೇ ತಡ, ಹೊಸದೊಂದು ಐಡಿಯಾ ಪ್ರಯೋಗಿಸಿತು. ಐವತ್ತು ಸಾವಿರದ ಮೇಲೆ ದಾನ ಮಾಡುವರು ನೇರವಾಗಿ ಸ್ಟುಡಿಯೋಗೆ ಬಂದು ಮಾತನಾಡಬಹುದು ಎಂದರು. ಕಾರ್ಯಕ್ರಮ ಲೈವ್‌ ಬೇರೆ. ದುಡ್ಡು ಬರದೇ ಇರುತ್ತದೆಯೇ? ಪ್ರವಾಹವೂ ಲೈವ್‌, ಪರಿಹಾರವೂ ಲೈವ್‌. ಹೇಗಿದೆ?

ವಿದ್ಯುನ್ಮಾನ ಮಾತ್ರವಲ್ಲ ಮುದ್ರಣವೂ ಸೇರಿದಂತೆ ಇಂದು ಮಾಧ್ಯಮಗಳು ನಾಚಿಕೆಯಿಲ್ಲದಷ್ಟು ವಾಣಿಜ್ಯೀಕರಣಗೊಂಡಿದೆ. ಸಂಪಾದಕೀಯದ ಸ್ಥಳಗಳನ್ನೇ ಮಾರಲಾಗುವ ಇಂದಿನ ಕಾಲದಲ್ಲಿ ಪ್ರಿಂಟ್‌ ಪತ್ರಿಕೋದ್ಯಮವಂತೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ (ಪಿ.ಆರ‍್) ಕೈಗೊಂಬೆಯಾಗಿದೆ. ಅದಕ್ಕೇ ಖ್ಯಾತ ಚಿಂತಕ ನೋಮ್‌ ಛಾಮ್‌ಸ್ಕೀ ಹೇಳಿದ್ದು, ‘ಮಾಧ್ಯಮ ಎನ್ನುವುದು ಈಗ ಒಂದು ಕಲಾಪ್ರಕಾರವೂ ಅಲ್ಲ, ಸಂವಹನ ಮಾಧ್ಯಮವೂ ಅಲ್ಲ. ಅದು ಬಳಕೆ ಸಾಮಗ್ರಿಗಳ ಉತ್ಪಾದಕರಿಗೆ ಗ್ರಾಹಕರನ್ನು ತಲುಪಲಿಕ್ಕೆ ಅನುಕೂಲ ಮಾಡಿಕೊಡುವ ಒಂದು ತಂತ್ರಜ್ಞಾನ ಮಾತ್ರ’.

ಈ ವರ್ಷದ ಅತ್ಯತ್ತಮ ಟಿವಿ ಪ್ರಶ್ನೆ ಎನ್ನುವುದಕ್ಕೆ ಯಾರೋ ಉದಾಹರಣೆ ಕೊಟ್ಟರು. ವಿಷಯ:- ಕರುಣಾಕರ ರೆಡ್ಡಿ ನಿವಾಸದಲ್ಲಿ ಹಾವು.

ವರದಿಗಾರನ ಪ್ರಶ್ನೆ- ದೊಡ್ಡ ಹಾವು ಕಂಡರೆ ಏನು ಮಾಡಬೇಕು? ಚಿಕ್ಕ ಹಾವು ಕಂಡರೆ ಏನು ಮಾಡಬೇಕು?

Tuesday 20 October 2009

ಎಲ್ಲೋ ಮಳೆಯಾಗಿದೆಯೆಂದು...



ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ 'ಮೆಂಟಲ್‌ಗಳ' ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು.

ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ... ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. "ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ" ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. "ಪುಣ್ಯಕೋಟಿ ಗೋವಿನ ಹಾಡು". ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.

ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. "ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು" ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು..
'ಖಂಡವಿದಕೋ, ಮಾಂಸವಿದಕೋ,
ಗುಂಡಿಗೆಯ ಬಿಸಿರಕ್ತವಿದಕೋ,
ಉಂಡು ಸಂತಸಗೊಂಡು ನೀ
ಭೂಮಂಡಲದೊಳು ಬಾಳಯ್ಯನೆ' ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು. ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ.

ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ.

ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ. ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ..

ಎಲ್ಲೋ ಮಳೆಯಾಗಿದೆಯೆಂದು....

ಚಿತ್ರ ಕೃಪೆ - http://my.opera.com

Sunday 11 October 2009

ಹೊಸ ತಲೆಮಾರಿನ ತಲ್ಲಣ

ಒಮ್ಮೆ ಚಿಲಿ ದೇಶದ ಕವಿ ನೆರೂಡನಿಗೆ ಸಂದರ್ಶಕಿಯೊಬ್ಬಳು ಒಂದು ಗಂಭೀರ ಪ್ರಶ್ನೆ ಕೇಳಿದಳು. ನೀವು ನಿಮ್ಮ ಪುಸ್ತಕಗಳಲ್ಲಿ ಒಂದನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಬೇಕಾಗಿ ಬಂದರೆ ಯಾವ ಪುಸ್ತಕ ರಕ್ಷಿಸಿಕೊಳ್ಳುತ್ತೀರಿ?

ನೆರೂಡ ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.

ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು. ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ.

ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.

ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.

ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.

Thursday 16 July 2009

ಅಬೋಲಿನ್ ಕುದುರೆಯೂ ಕಿಂಗ್‌ಫಿಷರ್ ಡರ್ಬಿಯೂ


ಕಳೆದ
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಿಂಗ್‌ಫಿಷರ್ ಡರ್ಬಿಯಲ್ಲಿ ಬುಕ್ಕಿಗಳ ಸರ್ವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಬೋಲಿನ್ ಎಂಬ ಕುದುರೆ ೭೯.೨೦ ಲಕ್ಷ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿತು. ಗೆಲ್ಲುವುದಕ್ಕೂ ಸ್ವಲ್ಪ ಮುಂಚೆ ಈ ಕುದುರೆ ನಮ್ಮಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಯಾವ ಪರಮಾತ್ಮನಿಂದಲೂ ಊಹಿಸಲಿಕ್ಕಾಗದು ಎನ್ನುವ ಭಾವದಲ್ಲಿ ಅಶ್ವಶಾಲೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಹುರುಳಿ ತಿನ್ನುತ್ತಿತ್ತು. ಅದನ್ನು ಓಡಿಸಿದ ಜಾಕಿ ಅಲ್ಫೋರ್ಡ್‌ಗೆ ಅಬೋಲಿನ್ ಗೆಲ್ಲುತ್ತದೆ ಎನ್ನುವ ಸಣ್ಣ ವಿಶ್ವಾಸ ಕೂಡಾ ಹಿಂದಿನ ದಿನ ರಾತ್ರಿ ವಿಸ್ಕಿ ಕುಡಿಯುವಾಗಲೂ ಇರಲಿಲ್ಲ.

ಕುದುರೆ ಜೂಜಿನ ಮಾಯಾಲೋಕವೇ ಅಂಥದ್ದು. ಹಚ್ಚ ಹಸಿರಿನ ಎರಡು ಕಿ.ಮೀ ಸುತ್ತಳತೆಯ ಅಂಗಳದಲ್ಲಿ ನಡೆಯುವ ರೇಸಿನಲ್ಲಿ ಯಾವ ಕುದುರೆ ಯಾರ ಭವಿಷ್ಯವನ್ನು ಬರೆಯಲಿದೆ, ಇನ್ಯಾರ ಮನೆಯ ದೀಪವನ್ನು ನಂದಿಸಲಿದೆ ಎನ್ನುವುದು ನಿಜಕ್ಕೂ ಆ ದೇವರಿಂದಲೂ ಊಹಿಸಲು ಸಾಧ್ಯವಾಗದ ಕೆಲಸ. ಯಾವ ಭವಿಷ್ಯಕಾರನೂ, ಎಂಥ ವಿಜ್ಞಾನಿಯೂ, ಯಾವ ಗಿಣಿಶಾಸ್ತ್ರಜ್ಞನೂ ಗೆಲ್ಲುವ ಕುದುರೆಯನ್ನು ಊಹಿಸಿ ಹೇಳಲಾರ. ಓಡಲಿರುವ ಕುದುರೆಯ ವಂಶವನ್ನೇ ಪತ್ತೆಹಚ್ಚಿ ಅದರ ವಂಶವಾಹಿಯನ್ನೇ ಹುಡುಕಿ ತಂದರೂ, ಇದೇ ಕುದುರೆ ಗೆಲ್ಲುತ್ತದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಹೆಣ್ಣಾದರೆ ಅದಕ್ಕೆ ಮುಟ್ಟೂ, ಗಂಡಾದರೆ ಬೆದೆಯೂ ಕಾಡಬಹುದು ಎಂದು ಲಂಕೇಶ್ ಒಮ್ಮೆ ಬರೆದಿದ್ದರು.

ಕುದುರೆ ಜೂಜಿನ ಬಗ್ಗೆ ಏನೇನೂ ಗೊತ್ತಿಲ್ಲದ ನಾನು ಕಳೆದ ಭಾನುವಾರ ಬೆಳಿಗ್ಗೆ ಬೇಗನೇ ಎದ್ದ ತಪ್ಪಿಗೆ ರೇಸ್‌ಕೋರ್ಸ್ ರಸ್ತೆಯ ಮುಂದೆ ಬಂದು ನಿಂತಿದ್ದೆ. ರಸ್ತೆಯಂಚಿನಲ್ಲಿ ನಿಂತಿದ್ದ ಕಿಂಗ್‌ಫಿಷರ್ ಹೋರ್ಡಿಂಗ್ಸ್‌ಗಳೆಲ್ಲಾ ಬೆಳ್ಳಂ ಬೆಳಿಗ್ಗೆಯೇ ನಶೆ ಏರಿಸಿಕೊಂಡವರಂತೆ ನಿಂತಿದ್ದವು. ಟರ್ಫ್ ಕ್ಲಬ್ ಮುಂದಿನ ಅಂಗಳದಲ್ಲಿ ಒಂದಿಷ್ಟು ಪಂಟರು ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಹಿಂದೆಲ್ಲಾ ಬೆಂಗಳೂರಿನಲ್ಲಿ ಅಣ್ಣಾವ್ರ ಚಿತ್ರ ಬಿಡುಗಡೆಯಾದಾಗ ಗರುವಾರ ರಾತ್ರಿಯೇ ಅಭಿಮಾನಿಗಳು ಹಾಸಿಗೆಯೊಂದಿಗೆ ಬಂದು ಥಿಯೇಟರ್ ಎದುರು ಮಲಗಿ, ಬೆಳಿಗ್ಗೆ ಎದ್ದು ಸರತಿ ಸಾಲಿನಲ್ಲಿ ನಿಂತು, ನುಗ್ಗಾಟ ನಡೆಸಿ, ಚಿತ್ರ ನೋಡಿ ಹೋಗುತ್ತಿದ್ದರಂತೆ. ಕಿಂಗ್ ಫಿಷರ್ ಡರ್ಬಿಯಲ್ಲಿ ಪಾಲ್ಗೊಳ್ಳಲು ಜೂಜು ಪ್ರೇಮಿಗಳು ಇಂಥದೇ ಕಸರತ್ತು ನಡೆಸಿದ ಹಾಗಿತ್ತು. ಬೆಳಿಗ್ಗೆ ಏಳಕ್ಕೆಲ್ಲಾ ಟರ್ಫ್ ಕ್ಲಬ್ ಮುಂದೆ ಜನ ಜಮಾಯಿಸಿದ್ದರು. ರೇಸಿನಲ್ಲಿ ಓಡಲಿರುವ ಕುದುರೆಗಳ ಹೆಸರನ್ನು ಹೊತ್ತ ಒರಿಜಿನಲ್ ವಿಲ್ ಇತ್ಯಾದಿ ರೇಸ್ ಪುಸ್ತಕದ ಹರಿದ ಹಾಳೆಗಳು ಅಲ್ಲೊಂದು ಇಲ್ಲೊಂದು ಬಿದ್ದಿದ್ದವು.

ನನಗೆ ಕುತೂಹಲ ಕೆರಳಿಸಿದ್ದು ಕುದುರೆ ಜೂಜಲ್ಲ. ರೇಸು ಕುದುರಗಳ ಹೆಸರುಗಳು. ಬಕ್‌ಪಾಸರ್, ಗೆಲಿಲಿ, ರೆಡ್ ರೋಮಿಯೋ, ಜಿಪ್ಸಿ ಮ್ಯಾಜಿಕ್, ಜಾಕ್ವೆಲಿನ್, ಅಸ್ಟ್ರಾಲ್ ಫ್ಲಾಷ್, ರಿಯಲ್ ಡ್ರೀಮ್, ಲಾಸ್ಟ್ ನೈಟ್, ಸೊನ್ನೆಟ್, ಬೇಕಾನ್ ಲೈಟ್, ಫ್ರೀ ಸ್ಪಿರಿಟ್, ಬಕ್ ಮೇಕರ್, ಕಿಚನ್ ಕ್ಯಾಬಿನೆಟ್, ರೆಡ್ ಟೆರರ್, ಫೈರ್ ಕ್ರಸ್ಟ್, ಕೋಮಾಂಛೆ, ಪ್ಲಾಟಿನಂ ಗರ್ಲ್, ಸೀಕ್ರೇಟ್ ಹಾರ್ಟ್, ಬ್ಲಾಕ್ ಪರ್ಲ್ ವ್ಹಾ... ಎಷ್ಟೊಂದು ರೊಮ್ಯಾಂಟಿಕ್ ಹೆಸರುಗಳು. ನಮ್ಮೂರಿನ ಕೆಲವು ಕಿಲಾಡಿಗಳು ತಮ್ಮ ಸಾಕುನಾಯಿಗಳಿಗೆ ಇಂತಹ ತೂಕದ ಹೆಸರನ್ನು ಇಡುವುದಿದೆ. ನಮ್ಮ ಪಕ್ಕದ ಮನೆಯ ನಾಯಿಯ ಹೆಸರು ಲಾಡೆನ್. ಬುಷ್ ಮತ್ತು ಮುಷರಫ್ ಅದರ ಹಿಂಬಾಲಕರು. ಬರಿ ಅನ್ನವನ್ನೇ ತಿನ್ನುತ್ತಿದ್ದ ನಾಯಿಯೊಂದರ ಹೆಸರು ರೈಸ್ (ಕೊಂಡೊಲಿಜಾ ರೈಸ್). ವಿಚಿತ್ರವಾಗಿ ಕೂಗುತ್ತಿದ್ದ ನಾಯಿಯ ಹೆಸರು ಜಾಕ್ಸನ್. ಸ್ವಲ್ಪ ವೈಯಾರದಿಂದಿದ್ದ ಹೆಣ್ಣು ನಾಯಿಯೊಂದಕ್ಕೆ ಇಟ್ಟ ಹೆಸರು ಸಿಲ್ಕ್. ನಮ್ಮ ಮನೆಯಲ್ಲಿ ಕಡುಕಪ್ಪು ಬಣ್ಣದ ನಾಯಿಯೊಂದಿತ್ತು ಅದಕ್ಕೆ ನಾವಿಟ್ಟ ಹೆಸರು ಶಾಡೋ.

ಟರ್ಫ್ ಕ್ಲಬ್ ಆವರಣದಲ್ಲಿ ಕುದುರೆಯ ಖುರಪುಟದ ಸದ್ದುಗಳು ಕೇಳಿಬರುವ ಹೊತ್ತಿನಲ್ಲಿ ನಾನು ಈ ಕುದುರೆಯ ಹೆಸರಿಗೂ ನಮ್ಮೂರ ಶ್ವಾನದಳದ ಹೆಸರಿಗೂ ಇರುವ ಸಂಬಂಧವನ್ನು ತಾಳೆ ಹಾಕುತ್ತಿದ್ದೆ. ಯಾಕೆ ಒಂದು ನೂರು ರೂಪಾಯಿ ಆಡಿ ಅದೃಷ್ಟ ಪರೀಕ್ಷಿಸಬಾರದು ಅಂತ ಅನಿಸಿದರೂ, ಮನುಷ್ಯನ ವಿನಾಶಕ್ಕೆ ಅತ್ಯಂತ ಹತ್ತಿರದ ದಾರಿ ಕುದುರೆ ಜೂಜು ಎನ್ನುವ ವಿವೇಕ ಎಚ್ಚರಿಸಿತು. ಕೂಲಿಕಾರರು, ಜವಾನರು, ರಿಕ್ಷಾಡ್ರೈವರ್‌ಗಳು, ಸರ್ಕಾರಿ ನೌಕರಸ್ತರು ಹೀಗೆ ರೇಸಿನ ದಾಸ್ಯಕ್ಕೆ ಸಿಕ್ಕವರು ಎಷ್ಟೊಂದು ಜನ ಎನಿಸಿತು. ಒಂದಿಷ್ಟು ಸುತ್ತಾಡಿ ಅಲ್ಲಿಂದ ಮರಳಿದೆ.

ಅಬೋಲಿನ್ ಎಪ್ಪತ್ತೊಂಭತ್ತು ಲಕ್ಷ ಗೆದ್ದಿರಬಹುದು. ಸುಮಾರು ೯ ಕೋಟಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ. ಆದರೆ ಅದು ಗೆದ್ದ ದಿನ ನೂರಾರು ಬಡ ಜೂಜುಗಾರರ ಮನೆಯ ದೀಪಗಳೂ ನಂದಿವೆ....!

Monday 15 June 2009

ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ

ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್. ಬೋದಿಲೇರ್‌ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ ತೇಲುತ್ತಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಮ್ಮಲ್ಲಿ ಕೆಲವೇ ಕೆಲವು ಜನರು ಮಾತ್ರ ಸಂಜೆಯ ಹೊತ್ತಿಗೆ ಬೋದಿಲೇರ್‌ನನ್ನು ನೆನಪಿಸಿಕೊಳ್ಳುತ್ತಾರಲ್ಲಾ ಎಂದು ಬೇಜಾರಾಗುತ್ತದೆ. ಒಮ್ಮೆ ತೇಜಸ್ವಿಯ ’ಕರ್ವಾಲೋ’ ಓದಿ ಲಂಕೇಶ್ "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು" ಎಂದು ಬರೆದಿದ್ದರು. ನನಗೂ ಕೂಡ ಇತ್ತೀಚೆಗೆ ಯಾಕೋ ಬೋದಿಲೇರ್‌ನಂತೆ ಕುಡಿದ ಸ್ಥಿತಿಯಲ್ಲಿ ಮಂದಣ್ಣನಂತೆ ಆರಾಮವಾಗಿ ತಿರುಗಾಡಿಕೊಂಡು ಇರಬೇಕು ಅನಿಸುತ್ತಿದೆ.

ಹೈದ್ರಾಬಾದ್‌ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್‌ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.

"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.

ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್‌ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್‌ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.

ಕನ್ನಡದಲ್ಲಿ ಪ್ರತಿದಿನವೂ ಆಪ್‌ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು ಪರ್ಯಾಯದ ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್‌ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್‌ಕ್ಲಬ್‌ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.

Tuesday 3 February 2009

ಏಟ್ಸ್, ಎಂಜಿ ರಸ್ತೆ ಮತ್ತು ತರಲೆ ಹುಂಜ

ಬಿಸಿಲು ಚಿನ್ನದ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿಹೌಸ್‌ನಲ್ಲಿ ಕುಳಿತು ಬೆಂಗಳೂರನ್ನು ಅಪಾರ ಮೋಹದಿಂದ ನೋಡುತ್ತಿದ್ದೆ. ಮೈಮೇಲೆ ಎಚ್ಚರವಿಲ್ಲದೆ ಧಾವಿಸುವ ಹರೆಯದ ಹುಡುಗ ಹುಡುಗಿಯರು, ಪರಸ್ಪರ ಸೊಂಟ ಬಳಸಿ ನಡೆಯುವ ಪ್ರೇಮಿಗಳು, ಬ್ರಿಗೇಡ್ ರಸ್ತೆಯ ಕೆಂಪು, ಹಸಿರು ನಿಯಾನ್ ದೀಪಗಳಲ್ಲಿ ಯೌವನ ಉಕ್ಕಿಸುವ ತರುಣಿಯರು, ಸಂಜೆಗತ್ತಲಿಗೆ ಅಮಲು ತರಿಸುವಂತೆ ಹಾರುವ ಮುಂಗುರುಳುಗಳು ಎಲ್ಲವನ್ನೂ ತಣ್ಣನೆಯ ಅಸೂಯೆಯಿಂದ ನೋಡುತ್ತಿದ್ದೆ.

‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್‌ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್‌ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್‌ಟಿಸಿ ಬಸ್ಸು ಹತ್ತಿದ್ದೆ.

ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ ಚಿತ್ರಾ ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್‌ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.

ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್‌ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್‌ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ ಕೂಗಿ ನಿಲ್ಲಿಸುವುದಿಲ್ಲ. ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.

‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ ಶಿವು ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.

Monday 29 December 2008

ಕೆಲಸವಿಲ್ಲದೇ ಕಳೆದ ಒಂದು ತಿಂಗಳು

ಆರ್ಥಿಕ ಮುಗ್ಗಟ್ಟಿನಿಂದ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ನೋಟೀಸು ಕೂಡ ಕೊಡದೆ ತೆಗೆದುಹಾಕುತ್ತಿರುವಾಗ, ಕೆಲಸದಲ್ಲಿರುವವರು ತಮ್ಮ ಕೆಲಸ ಯಾವಾಗ ಹೋಗುತ್ತದೆಯೋ ಎನ್ನುವ ಸ್ಥಿತಿಯಲ್ಲಿರುವಾಗ, ಈಗ ಹಗಲು ದೀಪ ಹಚ್ಚಿ ಹುಡುಕಿದರೂ ಒಂದೇ ಒಂದು ಕೆಲಸ ಖಾಲಿ ಇಲ್ಲದಿರುವಾಗ, ನಾನೇನು ಮಾಡಿದೆ ಗೊತ್ತೇ? ನನ್ನ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೋಗಿದ್ದೆ. ನಿನಗೇನು ಹುಚ್ಚು ಹಿಡಿದಿದೆಯಾ? ಅಂತ ನೀವು ಬೈಯಬೇಡಿ. ಈಗಾಗಲೇ ಸಾಕಷ್ಟು ಜನ ಇದಕ್ಕಿಂತಲೂ ಚೆನ್ನಾಗಿಯೇ ನನ್ನನ್ನು ಬೈದಿದ್ದಾರೆ. `ಈಗ ನನಗೆ ಕೆಲಸ ಇಲ್ಲ ಕಣೋ/ಕಣೇ`ಎಂದು ಹೇಳಿ ಎಲ್ಲರಿಂದಲೂ ಒಂದಿಷ್ಟು ಪ್ರೀತಿ, ಅನುಕಂಪ ಪಡೆಯಬಹುದು ಎಂದು ನಿರೀಕ್ಷಿಸಿದ್ದ ನನಗೆ ಎಲ್ಲರಿಂದಲೂ ಸರಿಯಾಗಿ ಬೈಗುಳ ಸಿಕ್ಕಿತ್ತು. ಜೊತೆಗೆ ಹೊಟ್ಟೆ ತುಂಬುವಷ್ಟು ಮಂಗಳಾರತಿ. ನಿನಗೆ ಇನ್ನೊಂದೆರಡು ವರ್ಷ ಕೆಲಸವೇ ಸಿಗುವುದಿಲ್ಲ ಎಂದು ಹೆದರಿಸಿದವರೂ ಇದ್ದಾರೆ.

ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.

ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ. ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.

ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.

ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.

Friday 28 November 2008

ಮಂಜು ಸುರಿಯುವ ಈ ಮುಂಜಾವಿನಲ್ಲಿ...

ಈವತ್ತು ಬೆಳಿಗ್ಗೆ ಮೈಸೂರಿನಲ್ಲಿ ಸೋನೆಮಳೆಯಂತೆ ಮಂಜು ಸುರಿಯುತ್ತಿತ್ತು. ಸಹಿಸಲಸಾಧ್ಯ ಚಳಿ ಬೇರೆ. ಈಗಿನ್ನೂ ಏಳು ಗಂಟೆಯಾಗಿರಬಹುದು ಎಂದು ಎದ್ದು ನೋಡಿದರೆ ಹನ್ನೊಂದಾಗಿತ್ತು. ನಾನು ಎಲ್ಲಿದ್ದೇನೆ ಎಂದು ನನಗೇ ಗುರುತು ಸಿಗದ ಹಾಗೆ ಮಂಜು ಆವರಿಸಿಕೊಂಡಿತ್ತು. ನನ್ನ ರೂಮಿನ ಹಿಂದಿನ ಎಲೆಕ್ಟ್ರಿಕ್ ತಂತಿಯ ಮೇಲೆ ಕುಳಿತು ದಿನಾಲೂ ರೊಮಾನ್ಸ್ ಮಾಡುತ್ತಿದ್ದ ಗುಬ್ಬಚ್ಚಿಗಳು ಈವತ್ತು ಯಾಕೋ ಮಂಜಿನಲ್ಲಿ ತೊಯ್ದು ಹೋಗಿ ಈ ಚಳಿಯಲ್ಲಿ ನಡುಗುತ್ತಾ ಒಂದಕ್ಕೊಂದು ಅಂಟಿಕೊಂಡು ಕುಳಿತಿದ್ದವು. ನನಗೆ ಏಕೋ ಪಾಪ ಅನಿಸತೊಡಿಗಿತು. ನಾವು ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಈ ರೀತಿ ತೋಯಿಸಿಕೊಂಡು ಹಾರಲಾಗದೆ ಶಾಲೆಯ ಹಂಚಿನ ಮಾಡಿನ ಕೆಳಗೆ ಕೂರುತ್ತಿದ್ದ ಗುಬ್ಬಚ್ಚಿಗಳನ್ನು ಹಿಡಿದು, ಅದನ್ನು ರಟ್ಟಿನ ಬಾಕ್ಸ್‌ನಲ್ಲಿ ಬಂಧಿಸಿಡುತ್ತಿದ್ದೆವು. ನಂತರ ಅದರ ಕಾಲಿಗೊಂದು ದಾರ ಕಟ್ಟಿ, ಆ ದಾರದ ತುದಿಯಲ್ಲಿ ಪೇಪರ್‌ ಒಂದನ್ನು ಕಟ್ಟಿ, ಅದರಲ್ಲಿ ನಮ್ಮ ನಮ್ಮ ತರಗತಿಯ ವಿದ್ಯಾರ್ಥಿಗಳೆಲ್ಲರ ಹೆಸರು ಬರೆದು ಹಾರಿ ಬಿಡುತ್ತಿದ್ದೆವು. ಆ ಗುಬ್ಬಚ್ಚಿ ಹಾರಿ ಅಮೆರಿಕಕ್ಕೆ ಹೋಗುತ್ತದೆಂದೂ, ಅಲ್ಲಿ ನಮ್ಮೆಲ್ಲರ ಹೆಸರನ್ನು ನೋಡಿ, ಇದು ಭಾರತದಿಂದ ಹಾರಿ ಬಂದ ಗುಬ್ಬಚ್ಚಿಯೆಂದೂ ಪತ್ತೆ ಹಚ್ಚುತ್ತಾರೆಂದೂ ಮಾತನಾಡಿಕೊಂಡು ಸಂಭ್ರಮಿಸುತ್ತಿದ್ದೆವು.

ಈವತ್ತು ನೋಡಿದರೆ ಮಳೆಯಲ್ಲಿ ತೋಯಿಸಿಕೊಂಡು ಹಾರಲಾಗದೆ ಕುಳಿತ ಗುಬ್ಬಚ್ಚಿಗಳ ಮೇಲೆ ಯಾವನೋ ಕಿಲಾಡಿ ಹುಡುಗನೊಬ್ಬ ಕ್ಯಾಟರ್‌ ಬಿಲ್ಲಿನಿಂದ ಕಲ್ಲು ಬೀಸುತ್ತಿದ್ದ. ನನಗೆ ರೋಸಿ ಹೋಗಿ ಆತನನ್ನು ಕರೆದು ಸರಿಯಾಗಿ ಬೈದು ಕಳುಹಿಸಿದೆ. ಯಾಕೋ ಮನಸ್ಸೆಲ್ಲಾ ಮುದುಡಿ ಹೋದಂತೆನಿಸಿ ಏನು ಮಾಡಲಾಗದೆ ಕೈ ಕೈ ತಿಕ್ಕಿಕೊಳ್ಳುತ್ತಾ ಅದರ ಬಿಸುಪಿನಲ್ಲಿ ಬೆಚ್ಚಗಾಗಲು ಯತ್ನಿಸುತ್ತಿದ್ದೆ. ನಮ್ಮ ಪಕ್ಕದ ಮನೆಯ ಆಂಟಿ - ಅಂಕಲ್ ಇಂತಹ ಚಳಿಯಲ್ಲಿಯೂ ಮನಗೇ ಬೆಂಕಿ ಬಿದ್ದವರಂತೆ ಭಯಂಕರವಾಗಿ ಜಗಳವಾಡುತ್ತಿದ್ದರು. ಮಾಜಿ ಪ್ರಧಾನಿ ವಿ.ಪಿ ಸಿಂಗ್ ತೀರಿಹೋಗಿದ್ದರಿಂದ, ಅವರ ಮಕ್ಕಳೂ ಕೂಡ ರಜೆಯಿಂದ ಮನೆಯಲ್ಲೇ ಇದ್ದು ಅಪ್ಪ ಅಮ್ಮನ ಜಗಳವನ್ನು ನೋಡುತ್ತಿದ್ದರು. ಮಕ್ಕಳ ಮುಂದೆ ಜಗಳವಾಡಬಾರದು ಎಂದು ಈ ತಂದೆತಾಯಿಗಳಿಗೆ ಹೇಳಿಕೊಡುವರು ಯಾರು ಎನ್ನುತ್ತಾ ಪೇಪರ್ ಓದೋಣವೆಂದರೆ ಅದು ಮಂಜಿನಲ್ಲಿ ಬಿದ್ದು ಕರಗಿ ಹೋಗಿತ್ತು. `ವೀರಮರಣ ಹೊಂದಿದ ಅಧಿಕಾರಿಗಳಿಗೆ ನಮ್ಮ ನಮನ`, `ಮಾಲೇಂಗಾವ್ ಸ್ಫೋಟದ ದೇಶಭಕ್ತರನ್ನು ರಕ್ಷಿಸಿ`, `ಶಿವರಾಜ್ ಪಾಟೀಲರನ್ನು ದೇಶದಿಂದ ಹೊರಹಾಕಿ` ಇಂತಹ ತರಹೇವಾರಿ ಮಸೇಜುಗಳಿಂದ ನನ್ನ ಇನ್‌ಬಾಕ್ಸ್ ತುಂಬಿ ಹೋಗಿ ಎಲ್ಲವನ್ನೂ ಒಂದೆಡೆಯಿಂದ ಡಿಲೀಟ್ ಮಾಡುತ್ತಾ ಕುಳಿತುಕೊಂಡೆ. ಇದ್ಯಾಕೋ ರೇಜಿಗೆ ಹುಟ್ಟಿಸಿದಂತೆನಿಸಿ ಸುಮ್ಮನೆ ಹೊರಬಂದು ತಿರುಗಾಡೋಣವೆಂದು ಹೊರಟೆ.

ನಾನಿರುವ ಹಿನ್‌ಕಲ್ ತುಂಬಾ ವಿಶೇಷತೆಗಳಿಂದ ಕೂಡಿದ ಊರು. ಇಲ್ಲೊಬ್ಬ ದಿನಾಲೂ ಪಲ್ಸರ್ ಗಾಡಿಯಲ್ಲಿ ಕುಳಿತು ಎಮ್ಮೆ ಮೇಯಿಸಿಕೊಂಡು ಬರುತ್ತಾನೆ. ಈವತ್ತು ಯಾಕೋ ಅವನು ಕಾಣಿಸದೆ ಹೋಗಿ, ಅವನ ಎಮ್ಮೆಗಳೆಲ್ಲಾ ಎಲ್ಲಿ ಮೇಯಲು ಹೋಗಿರಬೇಕೆಂದು ಪೆದ್ದು ಪೆದ್ದಾಗಿ ಯೋಚಿಸತೊಡಗಿದೆ. ದೂರದಲ್ಲಿ ನೋಡಿದರೆ ಕಟ್ಟಾ ಸುಬ್ರಮಣ್ಯ ನಾಯ್ಡುವಿನಂತೆ ಟೋಪಿ ಹಾಕಿಕೊಂಡು ಒಬ್ಬರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರ ಹೋಗಿ ನಮಸ್ಕಾರ ತಾತಾ ಎಲ್ಲಿಗೆ ಹೊರಟಿದ್ದೀರಾ ಎಂದರೆ ಅವರು ಏನೂ ಕೇಳಿಸಿಕೊಳ್ಳದಂತೆ ನಡೆಯುತ್ತಿದ್ದರು. ನೋಡಿದರೆ ಅವರು ಕಿವಿಗೆ ಶ್ರವಣ ಸಾಧನ ಹಾಕಿಕೊಂಡಿದ್ದರು:) ಇಲ್ಲಿರುವ ಒಂದು ಹೊಟೇಲ್‌ನಲ್ಲಿ ಎಕಾಮಿಕ್ಸ್ ಟೈಮ್ಸ್ ಪೇಪರನ್ನು ತರಿಸುತ್ತಾರೆ. ಸಾಮಾನ್ಯವಾಗಿ ಇಂತಹ ಹೊಟೇಲ್‌ಗಳಲ್ಲಿ ಸ್ಥಳೀಯ ನ್ಯೂಸ್ ಪೇಪರ್‌ಗಳನ್ನು ತರಿಸುವುದೂ, ಅದು ಒಂಭತ್ತು ಗಂಟೆಯಾಗುತ್ತಿದ್ದಂತೆ ಹರಿದು ಹಂಚಿ ಹೋಗುವುದೂ ಸಾಮಾನ್ಯ. ನೋಡಿದರೆ ಈ ಹೊಟೇಲ್ ಮಾಲಿಕ ಎಕನಾಮಿಕ್ಸ್ ಟೈಮ್ಸ್ ಪೇಪರನ್ನು ಜತನದಿಂದ ಎತ್ತಿಟ್ಟಿದ್ದ. ಕುತೂಹಲಕ್ಕೆ ವಿಚಾರಿಸಿದರೆ ಆತನದೂ ಒಂದು ಷೇರಿದ್ದು, ಮಂಗಳೂರಿನಲ್ಲಿ ಎಂಬಿಎ ಓದುತ್ತಿರುವ ಮಗನ ಆಸೆಯಂತೆ ಷೇರು ಪೇಟೆಯ ತಲ್ಲಣಗಳನ್ನು ತಿಳಿಯಲು ಆತ ಎಕನಾಮಿಕ್ಸ್ ಟೈಮ್ಸ್ ತರಿಸುತ್ತಿದ್ದಾನೆಂದೂ ತಿಳಿಯಿತು. ಸದ್ಯ ಆತನ ಷೇರುಗಳೆಲ್ಲಾ ಮುಳುಗಿ ಹೋಗಿರುವುದರಿಂದ ಆತನ ಹೊಟೇಲಿನ ತಿಂಡಿಯ ವಿಷಯದಲ್ಲೂ ಅದರ ಮುಗ್ಗಟ್ಟು ಕಾಣಿಸಿಕೊಂಡಿದೆ. ರೈಸ್‌ಬಾತ್‌‌ನಲ್ಲಿ ಟಮೋಟೊ, ಬೀನ್ಸ್, ಬಟಾಣಿ ಕಾಳುಗಳು ಮರೆಯಾಗಿರುವುದರ ಹಿಂದೆ ಈ ಆರ್ಥಿಕ ಮುಗ್ಗಟ್ಟು ಮತ್ತು ಏಕನಾಮಿಕ್ಸ್ ಟೈಮ್ಸ್‌ನ ಪ್ರಭಾವ ಇರುವುದನ್ನು ನಾನು ಪತ್ತೆಹಚ್ಚಿದೆ.

ಹನ್ನೆರಡು ಗಂಟೆಯಾದರೂ ಬಿಸಿಲು ಮೂಡದಿದ್ದರಿಂದ ಸುರಿಯುತ್ತಿರುವ ಮಂಜನ್ನು ಶಫಿಸುತ್ತಾ ನಾಯಿಗಳೆರಡು ನನ್ನ ಮನೆಯ ಮುಂದಿನ ಅಂಗಳದಲ್ಲಿದ್ದ ಮರಳಿನಲ್ಲಿ ಗುಂಡಿ ತೋಡಿ ಮಲಗಿಕೊಂಡು ಸೂರ್ಯನ ಆಗಮನಕ್ಕಾಗಿ ಕಾಯುತ್ತಿದ್ದವು. ಹಳ್ಳಿಯಿಂದ ಬಂದ ಅಜ್ಜನನೊಬ್ಬ ತಲೆಯ ಮೇಲೆ ಕೊತ್ತಂಬರಿ, ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯ, ಕಿಲ್‌ಕಿರೆ ಸೊಪ್ಪನ್ನು ಹೊತ್ತುಕೊಂಡು ಇಲ್ಲಿನ ಅಪಾರ್ಟ್‌ಮೆಂಟ್‌ಗಳ ಮುಂದೆ ಮಾರುತ್ತಿದ್ದ. ಆತ ಕಾಲಿಗೆ ಚಪ್ಪಲಿಯನ್ನೂ ಹಾಕಿರಲಿಲ್ಲ. ದುಡಿಯುವವರಿಗೆ ಮಳೆಯಾದರೆನು, ಚಳಿಯಾದರೇನು ಎಂದುಕೊಂಡೆ. ಈ ಅಜ್ಜನಿಂದ ಸ್ಫೂರ್ತಿ ಪಡೆದವನಂತೆ ಹುರುಪಿನಿಂದ ಎದ್ದು ರೆಡಿಯಾಗಿ ಆಫೀಸಿಗೆ ಬಂದರೆ, ಟಿವಿ ಒಂಭತ್ತರಲ್ಲಿ ಮುಂಬಯಿ ಭಯೋತ್ಪಾದನೆ ಕಾರ್ಯಾಚರಣೆ ಬರುತ್ತಿತ್ತು. ರಾಧಿಕಾ ರಾಣಿಯರು ಫುಲ್ ಖುಷಿಯೊಳಗೆ ವಾರ್ತೆ ಓದುತ್ತಿದ್ದರು. ` ಎಕೆ 47 ನಿಂದ ಹಾರಿದ ಗುಂಡುಗಳು ಎಷ್ಟು ವೇಗವಾಗಿತ್ತೆಂದರೆ ಅದು ನಮ್ಮ ದೆಹಲಿ ಪ್ರತಿನಿಧಿಯ ಕಣ್ಣಿಗೂ ಬೀಳಲಿಲ್ಲ` ಎನ್ನುವ ಅರ್ಥ ಬರುವಂತೆ ಏನೋನೋ ಮನೋರಂಜನೆ ನೀಡುತ್ತಿದ್ದರು. ಈ ಲೈವ್ ನ್ಯೂಸ್ ಕೇಳಿ ಕೇಳಿ ನನ್ನ ಕಿವಿಗಳು ಪಾವನವಾಗುವ ಅಪಾಯ ಇದ್ದಿದ್ದರಿಂದ, ಟಿವಿ ಮ್ಯೂಟ್ ಮಾಡಿ ಚಿತ್ರ ನೋಡುತ್ತಾ ಕುಳಿತುಕೊಂಡೆ. ನಿನ್ನೆ ಇದೇ ಟಿವಿಯ ವರದಿಗಾರರೊಬ್ಬರು ಬೆಂಗಳೂರಿನಲ್ಲಿ ನಿಂತುಕೊಂಡು ದೆಹಲಿಯ ತಾಜ್ ಹೊಟೇಲಿನೊಳಗೆ ಏನಾಗುತ್ತಿದೆ ಎನ್ನುವುದನ್ನು ಲೈವ್ ಕೊಡುತ್ತಿದ್ದರು. ಅಬ್ಬಾ! ಹೀಗೆಲ್ಲಾ ಲೈವ್ ಕೊಡಲು ಈ ಉತ್ತಮ ಸಮಾಜದವರಿಂದ ಮಾತ್ರ ಸಾಧ್ಯ ಎಂದುಕೊಂಡು ಟಿವಿ ಆಫ್‌ ಮಾಡಿ, ನನ್ನ ಕೆಲಸಕ್ಕೆ ಲಾಗಿನ್ ಆದೆ.

ಹೊರಗೆ ಮಂಜು ಸುರಿಯುತ್ತಲೇ ಇದೆ.